Momentary Alienation- 03


ಚಿತ್ರದ ಹಿಂದಿರುವ ವ್ಯಕ್ತಿಯಾದ ನನಿಗೆ ಸೌಂದರ್ಯ ವೃದ್ಧಿಯ ಚಿಂತೆ, ನನ್ನ ಚಿತ್ರದ ವಸ್ತುವಾದ ಆ ಮನುಷ್ಯನು ಹಿಂದಿರುವ ಎರಡು ಕಟ್ಟಡಗಳ ನಡುವೆ ಬರಬೇಕು ಎನ್ನುವ ಹಂಬಲ. ಆದರೆ ತನ್ನ ವೃತ್ತಿಯ ಬಿಡುವಿನಲ್ಲಿ ಹಿಂದಿರುವ ಕಟ್ಟಡದ ವಿಸ್ತಾರವನ್ನು ನೋಡಿ ಕಣ್ಣು ಅರಳಿಸುವನೆ? ಅಲ್ಲಿ ವಾಸಮಾಡುವ ಜನರ ಜೀವನ ಶೈಲಿ ನೆನೆದು ತುಸು ಅಸೂಯೆ ಪಟ್ಟಿರಬಹುದೇ? ದೂರದಲ್ಲೆಲ್ಲೋ ನಿಂತು ಅವನ ಚಿತ್ರ ತೆಗೆಯುತ್ತಿರುವ ನನ್ನ ಅಸ್ತಿತ್ವದ ಅರಿವು ಅವನಿಗೆಯಿಲ್ಲವಾದರು ಅವನು ತನ್ನ ಸುತ್ತಲಿರುವುದನ್ನು ಹೇಗೆ ನೋಡುತ್ತಾನೆಯೆಂಬ ಪ್ರಶ್ನೆ ನನ್ನ ಕಾಡಿದೆ. ಕ್ಷಣಿಕವಾಗಿ ನಾವಿರುವ ವ್ಯೋಮದಿಂದ ಪ್ರತ್ಯೇಕವಾಗಿ ಯಾವುದೋ ತ್ರಿಶಂಕುವನ್ನು ಪ್ರವೇಶಿಸಿ ಕ್ಷಣಾರ್ಧದಲ್ಲಿ ಹಿಂದಿರುಗುವ ಹಾಗೆ ಹಲವಾರು ಬಾರಿಯಾಗಿದೆ. ಈ ಬಡಾವಣೆಗಳಲ್ಲಿ ಸುಡು ಬಿಸಿಲಿನ ಮಧ್ಯಾಹ್ನದಲ್ಲಿ ಕಿವಿಕಟ್ಟುವ ಮೌನ ಆವರಿಸುತ್ತದೆ. ಮಹಡಿಯ ಮೇಲೆ ಚಪ್ಪಲಿಯಿಲ್ಲದೆ ಹೋಗಿ ಸುಡುವ ಕಾಂಕ್ರೀಟಿನ ಮೇಲೆ ನಿಂತಾಗ ಪರಕೀಯತೆ ಬಾಸವಾಗುತ್ತದೆ. ಯಾವುದೋ ರೆಸಾರ್ಟಿನಲ್ಲಿ ಚುಮು ಚುಮು ಚಳಿಯಲ್ಲಿ ಹಚ್ಚಿರುವ ಬೆಂಕಿಯನ್ನು ಏಕಾಗ್ರತೆಯಲ್ಲಿ ನೋಡುವಾಗ ಎಲ್ಲೋ ತೇಲಿಹೋಗುವಹಾಗುತ್ತದೆ. ಸಿಲ್ಕ್ ಬೋರ್ಡಿನ ಜನಜಂಗುಳಿಯ ಮದ್ಯ ಗಾಡಿಯ ಮೇಲೆ ಕೂತಿರುವಾಗ ಚರ್ಮ ಹಿಂಡಿ ಇದು ನಿಜವೇಯೆಂದು ನೋಡಿಕೊಳ್ಳಬೇಕೆಂದೆನಿಸುತ್ತದೆ. ಯಾವುದೋ ಹೂವರಳಿ ನೆಲಕಚ್ಚಿದ ಮೇಲೆ ಎತ್ತಿಕೊಂಡು ಅದರ ಒಳಗೇನಿಂದೆಯೆಂದು ಕಣ್ಣಿಗೆ ಹತ್ತಿರ ತಂದು ಇಣುಕಿದಾಗ ಜಗತ್ತಿನ ಅಗಾಧತೆಯ ಅರಿವು ಬಂದು ಮರು ಕ್ಷಣ ಮರೆಯಾಗಿ ಹೋಗುತ್ತದೆ. ಗುರುತು ಪರಿಚಯವಿಲ್ಲದ ಮನುಷ್ಯನನ್ನು ಅವರ ಅರಿವಿಗೆ ಬರದಹಾಗೆ ಸೂಕ್ಷ್ಮವಾಗಿ ನೋಡುವಾಗ ನಮಿಗೆ ಗೊತ್ತಿಲ್ಲದ ಪ್ರಪಂಚಕ್ಕೆ ಹೋಗಿ ಬಂದಹಾಗುತ್ತದೆ.




Comments

Popular posts from this blog

HOME

The chaos-Inside out

Tarmac